ಚೌಡಯ್ಯ, ಟಿ
1895-1967. ಏಳು ತಂತಿಗಳ ಪಿಟೀಲು ವಾದನದಲ್ಲಿ ಅದ್ವಿತೀಯರೆನಿಸಿಕೊಂಡ ಸಂಗೀತ ವಿದ್ವಾಂಸರು. ಇವರು ಹುಟ್ಟಿದ್ದು ಮೈಸೂರಿಗೆ ಹದಿನೆಂಟು ಮೈಲಿ ದೂರದಲ್ಲಿರುವ ತಿರುಮಕೂಡಲು ನರಸೀಪುರದಲ್ಲಿ, ತಂದೆ ಅಗಸ್ತ್ಯಗೌಡರು ಸ್ವತಃ ಪಿಟೀಲು ವಿದ್ವಾಂಸರು. ತಾಯಿ ಸುಂದರಮ್ಮ ಸಂಗೀತ ಮತ್ತು ಭರತನಾಟ್ಯಗಳಲ್ಲಿ ಪ್ರವೀಣೆ; ಅಲ್ಲದೇ ಸಂಸ್ಕøತವನ್ನು ಚೆನ್ನಾಗಿ ಬಲ್ಲವರು. ಹೀಗಾಗಿ ಚೌಡಯ್ಯನವರಿಗೆ ಬಾಲ್ಯದಲ್ಲಿ ತಾಯಿಯವರಿಂದಲೇ ಸಂಗೀತ ಶಿಕ್ಷಣ ದೊರಕಿತು. ಶಾಲಾಶಿಕ್ಷಣ ಸಮೀಪದ ನರಸೀಪುರದಲ್ಲಿ ನಡೆಯುತ್ತಿತ್ತು. ಒಮ್ಮೆ ಶಾಲೆಗೆ ಹೋಗುತ್ತಿದ್ದ. ಚೌಡಯ್ಯನವರನ್ನು ಅಹೋಬಲಾಚಾರ್ಯರೆಂಬ ಜ್ಯೋತಿಷಿಯೊಬ್ಬರು ಕಂಡು ನಿನ್ನ ಭವಿಷ್ಯ ಸಂಗೀತದಲ್ಲಿಯೇ ಹೊರತು ಪುಸ್ತಕದಲ್ಲಿಲ್ಲ ಎಂದು ಹೇಳಿ ಹುಡುಗನ ಕೈಯಲ್ಲಿದ್ದ ಪುಸ್ತಕಗಳನ್ನು ಕಾವೇರಿಗೆ ಬಿಸಾಡಿದರಂತೆ ಈ ಘಟನೆಯೇ ಚೌಡಯ್ಯನವರನ್ನು ಮೊಟ್ಟಮೊದಲಿಗೆ ಸಂಗೀತದತ್ತ ಪ್ರೇರೇಪಿಸಿದ್ದು. ಇದರೊಂದಿಗೆ ತಾಯಿಯ ಪ್ರೋತ್ಸಾಹವೂ ಸೇರಿ ಸಂಗೀತಾಭ್ಯಾಸಕ್ಕೆ ಮೈಸೂರು ಸೇರಿದರು.

	ಮೈಸೂರಿನಲ್ಲಿ ಆಗ ಸಂಗೀತದಲ್ಲಿ ವಿಶೇಷ ಖ್ಯಾತಿಯನ್ನು ಗಳಿಸಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಚೌಡಯ್ಯನವರು ಸಂಗೀತ ಶಿಕ್ಷಣವನ್ನು ಆರಂಭಿಸಿ (1910) 18 ವರ್ಷಗಳ ಕಾಲ ಶಿಷ್ಯವೃತ್ತಿ ಮಾಡಿ, ಪಿಟೀಲು ವಾದನದಲ್ಲಿ ಪ್ರವೀಣರಾದರು.

	ಬಿಡಾರಂ ಕೃಷ್ಣಪ್ಪನವರು ತಮ್ಮ ಶಿಷ್ಯ ಚೌಡಯ್ಯನವರನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಅನೇಕ ಬಾರಿ ತಮ್ಮ ಗುರುಗಳಿಗೆ ಪಕ್ಕವಾದ್ಯವನ್ನು ನುಡಿಸುವ ಸುಯೋಗವೂ ಇವರದಾಗುತ್ತಿತ್ತು. ಕೃಷ್ಣಪ್ಪನವರು ಆಗ ದಕ್ಷಿಣ ಭಾರತದ ಪ್ರತಿಭಾನ್ವಿತ ಸಂಗೀತ ವಿದ್ವಾಂಸರೆಂಬ ಕೀರ್ತಿಗೆ ಪಾತ್ರರಾಗಿದ್ದರು. ಹೆಸರಾಂತ ಪಿಟೀಲು ವಿದ್ವಾಂಸರಾದ ಅಳಗ ನಂಬಿಪಿಳ್ಳೆ, ದಕ್ಷಿಣಾಮೂರ್ತಿ ಪಿಳ್ಳೆ ಮೊದಲಾದ ಘನವಿದ್ವಾಂಸರು ಕೃಷ್ಣಪ್ಪನವರಿಗೆ ಪಕ್ಕವಾದ್ಯ ನುಡಿಸುತ್ತಿದ್ದರು. ಅಂಥವರಿಗೆ ಪಕ್ಕವಾದ್ಯ ನುಡಿಸುವುದು ಸಾಮಾನ್ಯದ ಮಾತಾಗಿರಲಿಲ್ಲ. 1924ರಲ್ಲಿ ಮೈಸೂರಿನಲ್ಲಿ ನಡೆದ ಕೃಷ್ಣಪ್ಪನವರ ಕಚೇರಿಯ ಒಂದು ಘಟನೆ ಇದಕ್ಕೆ ನಿದರ್ಶನವಾಗುತ್ತದೆ. ಅಂದು ಚೌಡಯ್ಯನವರು ತಮ್ಮ ಗುರುಗಳಿಗೆ ಮೊದಲ ಬಾರಿಗೆ ಪಕ್ಕವಾದ್ಯ ನುಡಿಸಬೇಕಾಗಿ ಬಂತು. ಅಂದು ಕೃಷ್ಣಪ್ಪನವರ ಕಚೇರಿಯೂ ಕಳೆಯೇರುತ್ತ ಸಾಗಿತ್ತು. ಪ್ರಧಾನ ರಾಗಲಾಪನೆಯನ್ನು ಕೃಷ್ಣಪ್ಪನವರ ಕಚೇರಿಯೂ ಕಳೆಯೇರುತ್ತ ಸಾಗಿತ್ತು. ಪ್ರಧಾನ ರಾಗಾಲಾಪನೆಯನ್ನು ಕೃಷ್ಣಪ್ಪನವರು ಮುಂದುವರಿಸಿದಾಗ ಚೌಡಯ್ಯನವರ ಕೈ ಸ್ವಲ್ಪಮಟ್ಟಿಗೆ ತಪ್ಪಿತು. ಕೃಷ್ಣಪ್ಪನವರಿಗೆ ಇದರಿಂದ ಎಷ್ಟು ಆಗ್ರಹವುಂಟಾಯಿತೆಂದರೆ, ಅವರು ಅಷ್ಟು ಜನರ ಸಮ್ಮುಖದಲ್ಲಿ ಶಿಷ್ಯನನ್ನು ದಂಡಿಸುವುದಕ್ಕೂ ಹಿಂಜರಿಯುವುದಿಲ್ಲ. ಚೌಡಯ್ಯನವರು ಗುರು ತೋರಿದ ಆಗ್ರಹವನ್ನು ಅನುಗ್ರಹವೆಂದೇ ಭಾವಿಸಿ ಬಹು ಜಾಗರೂಕತೆಯಿಂದ ಅವರ ದಾರಿಯನ್ನೇ ಅನುಸರಿಸಿ ಅಂದಿನ ಕಚೇರಿ ಯಶಸ್ವಿಯಾಗುವಂತೆ ಪಿಟೀಲು ನುಡಿಸಿ ಕೊನೆಯಲ್ಲಿ ಗುರುಗಳ ಮೆಚ್ಚಿಕೆಗೆ ಪಾತ್ರರಾದರು. ಚೌಡಯ್ಯನವರು ತಮ್ಮ ಗುರುಗಳಿಗೆ ಪಕ್ಕವಾದ್ಯ ನುಡಿಸುತ್ತಿದ್ದ ತಿರುಚಿ ಗೋವಿಂದಸ್ವಾಮಿ ಪಿಳ್ಳೆಯವರ ಶೈಲಿಗೆ ಮಾರುಹೋಗಿ ಅವರ ಶೈಲಿಯನ್ನೇ ಅನುಸರಿಸಿದರು. ಪಿಳ್ಳೆಯವರ ರಾಗನಿರೂಪಣೆ, ತಾಳವನ್ನು ನುಡಿಸುವಾಗ ಪಿಟೀಲಿನ ಕಮಾನು ಹಾಕುತ್ತಿದ್ದ ರೀತಿ ಮತ್ತು ಬೆರಳುಗಳನ್ನು ಉಪಯೋಗಿಸುತ್ತಿದ್ದ ವಿಧಾನಗಳನ್ನು ಗ್ರಹಿಸುವುದೇ ತಮ್ಮ ಮುಖ್ಯ ಗುರಿಯಾಗಿರುತ್ತಿತ್ತೆಂದು ಚೌಡಯ್ಯನವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ.

	ಪಿಟೀಲುವಾದನದಲ್ಲಿ ವಿಶೇಷ ನೈಪುಣ್ಯವನ್ನು ಪಡೆದುದರ ಜೊತೆಗೆ ಅದುವರೆವಿಗೂ ಸಾಮಾನ್ಯವಾಗಿ ನಾಲ್ಕು ತಂತಿ ಇರುತ್ತಿದ್ದ ಪಿಟೀಲಿಗೆ ಏಳುತಂತಿಗಳನ್ನು ಅಳವಡಿಸಿ, ಅದನ್ನು ಜನ ಮೆಚ್ಚುಗೆಗೆ ಪಾತ್ರವಾಗುವಂತೆ ಮಾಡಿದ ಕೀರ್ತಿ ಚೌಡಯ್ಯನವರಿಗೆ ಸಲ್ಲುತ್ತದೆ. ಆದರೆ ಏಳು ತಂತಿ ಪಿಟೀಲಿನಲ್ಲಿ ಶುದ್ಧ ಸ್ವರಗಳ ಮತ್ತು ಗಮಕಗಳ ನಿರೂಪಣೆ ಬಹಳ ಕಷ್ಟವಾದುದಾಗಿತ್ತು. ಚೌಡಯ್ಯನವರು ಅತೀವ ಸಾಧನೆಯಿಂದ ಅದನ್ನು ಯಶಸ್ವಿಯಾಗಿಸಿದರು. ಅನೇಕ ಪ್ರಸಿದ್ಧ ವಿದ್ವಾಂಸರ ಗಾಯನ ಕಚೇರಿಗಳಲ್ಲಿ ಇವರು ಏಳು ತಂತಿ ಪಿಟೀಲನ್ನೇ ಯಶಸ್ವಿಯಾಗಿ ಬಳಸಿದರು.

	ಕೃಷ್ಣಪ್ಪನವರ ಕಚೇರಿಗಳಿಗೆ ಅನೇಕ ವರ್ಷಗಳ ಕಾಲ ನುಡಿಸಿ ಅನುಭವ ಪಡೆದ ಅನಂತರ ಚೌಡಯ್ಯನವರು ಹೊರಗಿನ ವಿದ್ವಾಂಸರಿಗೆ ಪಕ್ಕವಾದ್ಯ ನುಡಿಸಲು ಪ್ರಾರಂಭಿಸಿದರು. ಹೀಗೇ ಅವರು ಮೊದಲು ಪಕ್ಕವಾದ್ಯ ನುಡಿಸಿದ್ದು ಪದ್ಮಭೂಷಣ ಅರಿಯಕುಡಿ ರಾಮಾನುಜ ಅಯ್ಯಂಗಾರ್ಯರ ಕಚೇರಿಯಲ್ಲಿ, ಅದೂ ಮದ್ರಾಸಿನ ರಸಿಕವೃಂದದ ಮುಂದೆ. ಅಂದೇ ಚೌಡಯ್ಯನವರು ತಮ್ಮ ಅಮೋಘ ಪಾಂಡಿತ್ಯದಿಂದ ಗಾನರಸಿಕರ ಮೆಚ್ಚುಗೆಗೆ ಪಾತ್ರರಾದರು.

	ಅಂದಿನಿಂದ ಅವನು ಕೊನೆಯ ಉಸಿರು ಎಳೆಯುವರೆಗೂ ಸುಮಾರು ಐದು ದಶಕಗಳ ಕಾಲ ಆಂಧ್ರ, ತಮಿಳುನಾಡು, ಉತ್ತರ ಹಿಂದೂಸ್ಥಾನಗಳ ಮುಖ್ಯ ಪಟ್ಟಣಗಳಲ್ಲಿ ತನಿ ಕಚೇರಿಗಳನ್ನು ಮಾಡಿದ್ದಲ್ಲದೆ ಪಕ್ಕವಾದ್ಯ ನುಡಿಸಿ ಮೈಸೂರಿನ ಕೀರ್ತಿಯನ್ನು ಎತ್ತಿ ಹಿಡಿದರು.

	ಚೌಡಯ್ಯನವರು ತಮ್ಮ ಕಲಾಪ್ರೌಢಿಮೆಯಿಂದ ಅನೇಕ ಬಿರುದು ಮತ್ತು ಗೌರವಗಳಿಗೆ ಪಾತ್ರರಾಗಿದ್ದರು. ಅರಮನೆ ವಿದ್ವಾಂಸರಾಗಿದ್ದುದಲ್ಲದೆ 1941ರಲ್ಲಿ ಆಳಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸಂಗೀತರತ್ನ ಎಂಬ ಬಿರುದನ್ನು ಪಡೆದರು. 1957ರಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿಯನ್ನೂ ಅದೇ ವರ್ಷದಲ್ಲಿ ಮದ್ರಾಸು ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನೂ ಪಡೆದರು. ಅದಲ್ಲದೆ ಸತ್ಯ ಸಾಯಿಬಾಬಾ ಮತ್ತು ಕಂಚಿ ಕಾಮಕೋಟಿ ಪೀಠದ ಜಗದ್ಗುರುಗಳು ಇವರಿಗೆ ಪೊನ್ನಡೈಯನ್ನು ಕೊಟ್ಟು ಪ್ರಶಂಸಿಸಿದರು. ತಮಿಳುನಾಡಿನಲ್ಲಿ ಇವರು ಮೈಸೂರು ಚೌಡಯ್ಯ ಎಂದೇ ಪ್ರಸಿದ್ದರಾಗಿದ್ದರು. ಚೌಡಯ್ಯನವರು 1952-58ರವರೆಗೆ ರಾಜ್ಯ ವಿಧಾನಪರಿಷತ್ತಿನ ನಾಮಕರಣ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆಂಬುದನ್ನು ಇಲ್ಲಿ ನೆನೆಯಬಹುದು.

	ಚೌಡಯ್ಯನವರು ಮಣಿ ಎಂಬ ಚಲನಚಿತ್ರದಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದು ಹೆಸರು ಗಳಿಸಿದರು. ಸಂಗೀತದಲ್ಲಿನ ತಮ್ಮ ಅನುಭವಗಳನ್ನು ವರ್ಣ, ಕೃತಿ ಮತ್ತು ತಿಲ್ಲಾನಗಳ ರೂಪದಲ್ಲಿ ತ್ರಿಮಕುಟ ಎಂಬ ಅಂಕಿತದಲ್ಲಿ ಕೂಡಿಸಿಟ್ಟಿದ್ದಾರೆ. ಚೌಡಯ್ಯನವರ ಶಿಷ್ಯವೃಂದ ಅಪಾರವಾದುದು. ಮೈಸೂರು ಮತ್ತು ಬೆಂಗಳೂರಿನಲ್ಲಿ ಇವನು ಅಯ್ಯನಾರ್ ಕಲಾಶಾಲೆಗಳನ್ನು 1945ರಲ್ಲಿ ಸ್ಥಾಪಿಸಿ, ಅನೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಯಲು ಅವಕಾಶ ಕಲ್ಪಿಸಿದರು. ಇವರ ಶಿಷ್ಯವೃಂದದಲ್ಲಿ ಆರ್. ಕೆ. ವೆಂಕಟರಮಣಶಾಸ್ತ್ರಿ (ಮದ್ರಾಸು), ವಿ. ಸೇತುರಾಮಯ್ಯ (ಮದ್ರಾಸು), ಸಿ.ಆರ್. ಮಣಿ (ಪಾಲಘಾಟ್), ಅಳಗಿರಿಸ್ವಾಮಿ (ರಾಮನಾಡ್), ವಿ. ರಾಮರತ್ನಂ (ಮೈಸೂರು), ಎಚ್.ಆರ್. ಸೀತಾರಾಮಶಾಸ್ತ್ರಿ, ಕುಮಾರಿ ಎಚ್.ಎಸ್. ಅನಸೂಯ (ಬೆಂಗಳೂರು) ಮೊದಲಾದವರು ಇದ್ದಾರೆ.
(ವಿ.ಆರ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ